ಹಳೆಯಂಗಡಿಯಲ್ಲಿ `ಪಚ್ಚನಾಡಿ’ ಡಂಪಿಂಗ್ ಯಾರ್ಡ್!!

ಮಂಗಳೂರು: `ಪಚ್ಚನಾಡಿ ಡಂಪಿಂಗ್ ಯಾರ್ಡ್’ಗೂ ಹಳೆಯಂಗಡಿಗೂ ಎಲ್ಲಿಯ ಸಂಬಂಧ ಅಂತ ಚಕಿತರಾಗ್ಬೇಡಿ. ಯಾಕೆಂದರೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್‍ನಂತೆಯೇ ಹಳೆಯಂಗಡಿಯಲ್ಲೂ ತ್ಯಾಜ್ಯ ರಾಶಿ ಬೀಳುತ್ತಿದೆ. ಹಳೆಯಂಗಡಿ ಜಂಕ್ಷನ್‍ನಿಂದ ಪಾವಂಜೆ ಬ್ರಿಡ್ಜ್ ತನಕ ಹತ್ತಿರತ್ತಿರ ಒಂದು ಕಿ.ಮೀ. ಉದ್ದಕ್ಕೂ ಹೆದ್ದಾರಿ ಪಕ್ಕ ತ್ಯಾಜ್ಯವನ್ನು ದಿನಾ ತಂದು ಸುರಿಯಲಾಗುತ್ತಿದ್ದು `ಪಚ್ಚನಾಡಿ’ಯನ್ನು ಮೀರಿಸುವತ್ತ ಹಳೆಯಂಗಡಿ ವೇಗವಾಗಿ ದಾಪುಗಾಲು ಇಡುತ್ತಿದೆ ಎಂದು ಅಚ್ಚರಿ ಪಡಬೇಕಿಲ್ಲ.


ಹಳೆಯಂಗಡಿಗೂ ತ್ಯಾಜ್ಯಕ್ಕೂ ಎಲ್ಲಿಲ್ಲದ ನಂಟು. ಕಳೆದೊಂದು ವರ್ಷದಿಂದ ಜಂಕ್ಷನ್ ಗಿಂತ ಮಾರುದೂರದಲ್ಲಿ ರಾಶಿ ಬೀಳುತ್ತಿದ್ದ ತ್ಯಾಜ್ಯವನ್ನು ಸ್ಥಳೀಯ ಯುವಕ ಮಂಡಲ, ಸಾರ್ವಜನಿಕರು ಮತ್ತು ಇತರ ಕೆಲವು ಸಂಘಟನೆಗಳು ತಾವೇ ತೆಗೆದು ಪರಿಸರವನ್ನು ಅಂದಗೊಳಿಸಿದ್ದರು. ನಂತರ ಇಲ್ಲಿ ತ್ಯಾಜ್ಯ ಬಿಸಾಡುವವರನ್ನು ಶಿಕ್ಷಿಸಲು ಸಿಸಿ ಕೆಮರಾ ಕೂಡಾ ತಮ್ಮದೇ ಸ್ವಂತ ಹಣದಲ್ಲಿ ಹಾಕಿದ್ದರು. ಇನ್ನೇನು ಇಲ್ಲಿನ ತ್ಯಾಜ್ಯಸಮಸ್ಯೆ ಮುಕ್ತಿ ಸಿಕ್ಕಿತು ಅನ್ನುವಷ್ಟರಲ್ಲಿ ಅಲ್ಲಿಂದ ಕೆಲವೇ ಮೀಟರ್ ದೂರದಲ್ಲಿ ಮತ್ತೆ ತ್ಯಾಜ್ಯ ಎಸೆಯಲು ಆರಂಭಿಸಿದ್ದರು. ತ್ಯಾಜ್ಯ ರಸ್ತೆ ಬದಿಯಿಂದ ಪಕ್ಕದ ಖಾಸಗಿ ಜಮೀನಿನುದ್ದಕ್ಕೂ ರಾಶಿ ಬೀಳತೊಡಗಿದ್ದು ಪಂಚಾಯತ್ ಗೆ ಅದೆಷ್ಟು ಬಾರಿ ದೂರಿದ್ದೂ ಕ್ರಮ ಜರುಗಿಸದ ಕಾರಣ ತ್ಯಾಜ್ಯ ರಾಶಿ ಬೆಳೆಯುತ್ತಲೇ ಹೋಯಿತು.

ಮುಂದೆ ಸ್ಥಳೀಯ ಸಂಘಟನೆಗಳೇ ತ್ಯಾಜ್ಯವನ್ನು ತೆಗೆದು ಅಲ್ಲೂ ಬ್ಯಾನರ್ ಹಾಕಿ ತ್ಯಾಜ್ಯ ಹಾಕದಂತೆ ಎಚ್ಚರಿಕೆ ನೀಡಿದ್ದರು. ಕೆಲವು ದಿನಗಳ ಕಾಲ ಇಲ್ಲಿ ತ್ಯಾಜ್ಯ ಸುರಿಯದೇ ಇದ್ದು ನಂತರದ ದಿನಗಳಲ್ಲಿ ಮತ್ತೆ ತ್ಯಾಜ್ಯ ಎಸೆಯಲು ಶುರು ಮಾಡಿದ್ದರು.
ಆದರೆ ಈಗ ದಿನಕಳೆದಂತೆ ಹೆದ್ದಾರಿಯುದ್ದಕ್ಕೂ ತ್ಯಾಜ್ಯ ರಾಶಿ ಬೀಳುತ್ತಿದೆ. ಹಳೆಯಂಗಡಿಯಿಂದ ಪಾವಂಜೆ ಬ್ರಿಡ್ಜ್ ತನಕ ತ್ಯಾಜ್ಯ ಬೇಕಾಬಿಟ್ಟಿ ಸುರಿಯಲಾಗುತ್ತಿದೆ. ಇನ್ನು ಕೇರಳ, ಗೋವಾದಿಂದ ಬರುವ ಮೀನಿನ ಲಾರಿಗಳು, ಉಡುಪಿ ನೋಂದಣಿಯ ಮೀನು ಲಾರಿಗಳು ಇಲ್ಲಿ ಯಾರ ಭಯವೂ ಇಲ್ಲದೆ ದುರ್ವಾಸನೆಭರಿತ ನೀರನ್ನು ಹೊರಕ್ಕೆ ಚೆಲ್ಲುತ್ತಿವೆ. ನೀರು ಹೆದ್ದಾರಿ ಬದಿ ರಾಶಿ ನಿಂತು ಇಡೀ ಪರಿಸರ ದುರ್ವಾಸನೆ ಬೀರುತ್ತಿದೆ.

ಇದಲ್ಲದೆ ಆಸ್ಪತ್ರೆಗಳಿಂದ ಮೆಡಿಕಲ್ ವೇಸ್ಟೇಜ್ ಸಾಗಿಸುವ ವಾಹನಗಳು ಕೂಡಾ ಇಲ್ಲಿ ಗೋಣಿಯಲ್ಲಿ ತುಂಬಿಸಿ ತಂದು ಸುರಿದು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದೆ. ಇದರಿಂದ ಪಾವಂತೆ ಬ್ರಿಡ್ಜ್ ಪಕ್ಕ ರಾಶಿಬಿದ್ದ ತ್ಯಾಜ್ಯ ಹೆದ್ದಾರಿಯ ತುಂಬಾ ಹರಡಿದ್ದು ದೂರದಿಂದ ಬಂದವರು ಇದು ಹಳೆಯಂಗಡಿಯೋ, ಪಚ್ಚನಾಡಿಯೋ ಎಂದು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ.

ಹಳೆಯಂಗಡಿ ಪಂಚಾಯತ್‍ಗೆ ಸ್ವಚ್ಛತೆಯ ಅರಿವು ಮೂಡಿಸುವವರಾರು?
ಕಳೆದೊಂದು ವರ್ಷದಿಂದ ತ್ಯಾಜ್ಯ ಸಮಸ್ಯೆ ಇಷ್ಟು ಗಂಭೀರವಾಗಿ ಬೆಳೆಯುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯಲು ಹಳೆಯಂಗಡಿ ಪಂಚಾಯತ್ ಸಂಪೂರ್ಣ ವಿಫಲವಾಗಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ನಾಗರಿಕರು ಧ್ವನಿಯೆತ್ತುತ್ತಲೇ ಬಂದಿದ್ದರೂ ತ್ಯಾಜ್ಯ ಸಂಗ್ರಹಣೆ, ನಿರ್ವಹಣೆಯಲ್ಲಿ ಪಂಚಾಯತ್ ಎಡವಿದೆ. ಈಗ ಹಳೆಯಂಗಡಿಯ ತ್ಯಾಜ್ಯ ಗಡಿ ದಾಟಿ ಪಾವಂಜೆಯ ನಂದಿಯ ಒಡಲು ಸೇರಲು ಮುಂದಾಗಿದ್ದರೂ ಇದರ ಕಡೆ ಪಂಚಾಯತ್ ಆಡಳಿತ ಕಣ್ತೆರೆದು ನೋಡುತ್ತಿಲ್ಲ. ಸ್ವಚ್ಛ ಭಾರತ, ಸ್ವಚ್ಛ ಪರಿಸರದ ಕಲ್ಪನೆಯೇ ಇಲ್ಲದ ಹಳೆಯಂಗಡಿ ಪಂಚಾಯತ್, ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ತ್ಯಾಜ್ಯದ ಭೂತ ಓಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವರೇ ಕಾದು ನೋಡಬೇಕಿದೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ… 

https://youtu.be/oSSbYbXwNbY

error: Content is protected !!