ಸುರತ್ಕಲ್ ಯುವಕನ ಹತ್ಯೆ: ಮೂವರ ಸೆರೆ 

ಮಂಗಳೂರು:- ಸುರತ್ಕಲ್ ಜಂಕ್ಷನ್ ಸಮೀಪದ ವೈನ್ಸ್ ಹಿಂಭಾಗದ ಹೋಟೆಲ್ ಒಂದರಲ್ಲಿ ನಡೆದ ಗುಡ್ಡೆಕೊಪ್ಲ ನಿವಾಸಿ ಸಂದೇಶ್ ಬಂಗೇರಾ(30) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ, ಗಣೇಶ್, ಸುಹೈಲ್ ಎಂಬವರನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ಮನೋಜ್ ಗುಡ್ಡೆಕೊಪ್ಲ ತಲೆಮರೆಸಿಕೊಂಡಿದ್ದಾನೆ.
ಘಟನೆಯ ವಿವರ:
ಸಂದೇಶ್ ಬಂಗೇರಾ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದು ಈ ಹಿಂದೆ ಸ್ಥಳೀಯ ಯುವಕರ ತಂಡದ ಜೊತೆ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಆ ತಂಡಕ್ಕೂ ಸಂದೇಶ್‍ಗೂ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಬೆಳೆದಿದ್ದು ಪರಸ್ಪರ ಗಲಾಟೆ, ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಶಬರಿಮಲೆಗೆ ತೆರಳಲು ಮಾಲೆ ಧರಿಸಿದ್ದ ಸಂದೇಶ್ ನಿನ್ನೆ ಮಧ್ಯಾಹ್ನವಷ್ಟೇ ಶಬರಿಮಲೆಯಿಂದ ವಾಪಸ್ ಆಗಿದ್ದ. ರಾತ್ರಿ ತನ್ನ ಸ್ನೇಹಿತರ ಜೊತೆ ಸುರತ್ಕಲ್ ಜಂಕ್ಷನ್ ಸಮೀಪದ ಜೀವನ್‍ತಾರಾ ವೈನ್ಸ್ ಹಿಂಭಾಗದಲ್ಲಿನ `ರುಚಿತಾ ಹೋಟೆಲ್’ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಏಕಾಏಕಿ ಸ್ಥಳಕ್ಕಾಗಮಿಸಿದ ಮನೋಜ್ ಮತ್ತಾತನ ಸಹಚರರು ಮಾತಿನ ಚಕಮಕಿ ನಡೆಸಿದ್ದಾರೆ. ಹೋಟೆಲ್ ಒಳಗಡೆ ಗಲಾಟೆ ಜೋರಾಗಿ ನಡೆದಿದ್ದು ಕೆಲವೇ ಕ್ಷಣಗಳಲ್ಲಿ ಸಂದೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ನಾಲ್ವರ ತಂಡ ಪರಾರಿಯಾಗಿದೆ.
ಘಟನೆ ಮಾಹಿತಿ ಪಡೆಯುತ್ತಲೇ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಠಾಣಾ ಪೊಲೀಸರು ಆರೋಪಿಗಳಾದ ಗಣೇಶ್, ಸುಹೈಲ್, ರಾಜು ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಮುಖ ಆರೋಪಿ ಮನೋಜ್ ಗುಡ್ಡೆಕೊಪ್ಲ ಪರಾರಿಯಾಗಿದ್ದು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
error: Content is protected !!