ಶಾಲಾ ದಿನಗಳ ಮೆಲುಕು ಹಾಕಿಸುವ ‘ಪೆನ್ಸಿಲ್ ಬಾಕ್ಸ್’


ಇಂದು ಬಿಡುಗಡೆಯಾಗಿರೋ ಪೆನ್ಸಿಲ್ ಬಾಕ್ಸ್ ಚಿತ್ರ ಶಾಲಾ ದಿನಗಳನ್ನು ಮೆಲುಕು ಹಾಕಿಸುತ್ತದೆ ಅದಕ್ಕಿಂತ ಮಿಗಿಲಾಗಿ ನಮ್ಮ ಸುತ್ತಮುತ್ತ ಅರೆಜೀವದಲ್ಲಿ ಉಳಿದಿರೋ ಸರಕಾರಿ ಶಾಲೆಗಳು ಮತ್ತದರ ಶಿಕ್ಷಕರು, ಮಕ್ಕಳ ದೈನೇಸಿ ಪಾಡು ಕಣ್ಣಿಗೆ ಕಟ್ಟುವಂತೆ ಬಿಚ್ಚಿಡುತ್ತದೆ. ಬಹುಷಃ ಇದೇ ಕಾರಣಕ್ಕೆ ರಝಾಕ್ ಪುತ್ತೂರು ಅನ್ನೋ ಪ್ರತಿಭಾನ್ವಿತ ಯುವನಿರ್ದೇಶಕ ಇಷ್ಟವಾಗುತ್ತಾರೆ.

ಪೆನ್ಸಿಲ್ ಬಾಕ್ಸ್ ನೂರಕ್ಕೆ ನೂರರಷ್ಟು ಮಕ್ಕಳ ಚಿತ್ರ. ಮಕ್ಕಳ ಜೊತೆ ಹೆತ್ತವರು, ಪೋಷಕರು ಕೂಡಾ ಚಿತ್ರ ನೋಡಿ ಖುಷಿ ಪಡಬಹುದು. ಚಿತ್ರದ ಪ್ರಮುಖ ಪತ್ರದಲ್ಲಿ ದೀಕ್ಷಾ ರೈ, ಸಮೃದ್ಧ್ ರೈ ಸಹಜವಾಗಿ ನಟಿಸಿರೋದು ಚಿತ್ರದ ಪ್ಲಸ್ ಪಾಯಿಂಟ್. ಇನ್ನು ಭೋಜರಾಜ್ ವಾಮಂಜೂರ್ ಪಿಟಿ ಮೇಷ್ಟ್ರಾಗಿ ಪ್ರೇಕ್ಷಕರಿಗೆ ಇಷ್ಟ ಆದ್ರೆ ಮೇಸ್ಟ್ರು ಅರವಿಂದ್ ಬೋಳಾರ್ ಅಭಿನಯ ಇಂಟರ್ ವಲ್ ಬಳಿಕ ನಗೆಯುಕ್ಕಿಸುತ್ತೆ. ಚಿತ್ರದ ಮೊದಲಾರ್ಧಕ್ಕಿಂತ ನಂತರದ ಭಾಗದಲ್ಲಿ ಕಥೆ ವೇಗ ಪಡೆದು ಸಾಗುವುದಲ್ಲದೆ ನಾವು ಕಲಿತ ಸರಕಾರಿ ಶಾಲೆ, ಅಲ್ಲಿನ ವಾತಾವರಣ, ಬಣ್ಣ ಮಾಸಿದ ಗೋಡೆ, ಮಕ್ಕಳ ಪಾಡು… ಇವೆಲ್ಲ ನೆನಪಿನಂಗಳದಿಂದ ಹಾಗೇ ಕಣ್ಮುಂದೆ ಸುಳಿಯುತ್ತೆ.
ಚಿತ್ರದಲ್ಲಿ ನಟಿಸಿರುವ ರಮೇಶ್ ರೈ ಕುಕ್ಕುವಳ್ಳಿ, ಸಂತೋಷ್ ಕೊಲ್ಯ, ಹರ್ಷ ರೈ ಮತ್ತಿತರರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೃಶ್ಯ ಮೂವೀಸ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಚಿತ್ರಕ್ಕೆ ದಯಾನಂದ ರೈ, ವಿನೋದ್ ಕುಮಾರ್, ಸತೀಶ್ ಶೆಟ್ಟಿ ಬಂಡವಾಳ ಹೂಡಿದ್ದಾರೆ.
‘ರೆಕ್ಕೆಯ ಕಟ್ಟದೆ ಮೆಟ್ಟಿಲು ಹತ್ತದೆ ಆಕಾಶ ಹತ್ತುವ ಹುನ್ನಾರ…’ ಹಾಡು ಥಿಯೇಟರ್ ನಿಂದ ಹೊರಬಂದ ಬಳಿಕವೂ ಗುನುಗುನಿಸಬಹುದು. ಪೆನ್ಸಿಲ್ ಬಾಕ್ಸ್ ಚಿತ್ರ ನಿಮ್ಮ ಮನೆಯ ಮಕ್ಕಳಿಗೂ ತೋರಿಸಿ. ‘ಸರಕಾರಿ ಶಾಲೆ’ ಬಳಿಕ ಬಂದ ಸದಭಿರುಚಿಯ ಚಿತ್ರವಿದು. ಥಿಯೇಟರ್ ಬಂದು ನೋಡಿದರೆ ಟಿಕೆಟ್ ಹಣಕ್ಕೆ ಖಂಡಿತ ಮೋಸವಿಲ್ಲ…

#ಶಶಿಬೆಳ್ಳಾಯರು

error: Content is protected !!