“ಸಾಯುವ ಮನಸ್ಸಿದ್ದರೆ ಸಂಘಟನೆ ಸೇರಿ, ಹಿಂದೂ ಯುವಕರ ಶವದ ಮೇಲೆ ಬಿಜೆಪಿ ರಾಜಕೀಯ” -ಹೇಳಿಕೆ ಪುನರುಚ್ಛರಿಸಿದ ಪ್ರತಿಭಾ ಕುಳಾಯಿ

ಮಂಗಳೂರು:`ಬಿಜೆಪಿ ಪಕ್ಷ ಹಿಂದೂ ಯುವಕರ ಶವದ ಮೇಲೆ ರಾಜಕೀಯ ಮಾಡುತ್ತಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಕೋಮುಗಲಭೆ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಅಷ್ಟೂ ಹತ್ಯೆ ಪ್ರಕರಣಗಳಲ್ಲಿ ಸಾವನ್ನಪ್ಪಿರುವವರು ಹಿಂದುಳಿದ ವರ್ಗಕ್ಕೆ ಸೇರಿದವರು. ಯುವಕರನ್ನು ಬಿಜೆಪಿ ಹಾಗೂ ಸಂಘಪರಿವಾರ ದಾರಿತಪ್ಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಸಾಯಬೇಕಿದ್ದರೆ ಸಂಘಟನೆ ಸೇರಿ ಎಂದು ಈ ಹಿಂದೆ ಹೇಳಿದ್ದೆ. ಈಗಲೂ ಆ ಹೇಳಿಕೆಗೆ ಬದ್ಧಳಾಗಿದ್ದೇನೆ’ ಎಂದು ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಯುವನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. `ನ್ಯೂ ಪೋಸ್ಟ್’ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಪ್ರತಿಭಾ ಕುಳಾಯಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
`ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೇ ಈ ಬಾರಿ ಏಳನೇ ವಾರ್ಡ್‍ನಿಂದ ಸ್ಪರ್ಧಿಸಿ ಸೋತಿದ್ದೇನೆ, ನನಗೆ ಈ ವಿಚಾರದಲ್ಲಿ ನೋವಾಗಲೀ, ನಾಚಿಕೆಯಾಗಲೀ ಇಲ್ಲ. ಇದನ್ನೇ ತಮ್ಮ ಟ್ರೋಲ್‍ಗಳಿಗೆ ಬಳಸುತ್ತಿರುವ ಸೋಷಿಯಲ್ ಮೀಡಿಯಾದ ಕೆಲವು ದಂಡಪಿಂಡಗಳು ಇನ್ನಾದರೂ ವಾಸ್ತವ ಸ್ಥಿತಿ ಅರಿತುಕೊಳ್ಳಬೇಕು ಎಂದು ಹೇಳಿದರು. ಕಾಟಿಪಳ್ಳದ ಉದಯ ಪೂಜಾರಿ, ಪೊಳಲಿ ಅನಂತು, ಮೂಡಬಿದ್ರೆ ಪ್ರಶಾಂತ್ ಪೂಜಾರಿ, ಮಾರ್ನಮಿಕಟ್ಟೆ ಚರಣ್ ಪೂಜಾರಿ, ಬಿಸಿರೋಡ್ ಶರತ್ ಮಡಿವಾಳ ಮತ್ತಿತರರು ಹಿಂದುಳಿದ ವರ್ಗಗಳಿಗೆ ಸೇರಿದ ಯುವಕರು. ಇವರೆಲ್ಲ ಜಿಲ್ಲೆಯಲ್ಲಿ ನಡೆದಿರುವ ಕೋಮು ಗಲಭೆಗಳಿಗೆ ಬಲಿಯಾದವರು. ಇಷ್ಟೇ ಅಲ್ಲದೆ ಕೋಟೇಶ್ವರದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಹಿಂದೂ ಯುವಕರ ಹತ್ಯೆ, ಬಂಟ್ವಾಳ ನಾವೂರಿನ ಹರೀಶ್ ಕೊಲೆ, ಬ್ರಹ್ಮಾವರ ಸಂತೆಕಟ್ಟೆಯ ಪ್ರವೀಣ್ ಪೂಜಾರಿ ಹತ್ಯೆಯನ್ನು ಯಾರು ಮಾಡಿದ್ದು? ಇವರೆಲ್ಲ ಹಿಂದೂ ಸಂಘಟನೆಗಳಲ್ಲಿ ಇದ್ದು ತಮ್ಮದೇ ಸಂಘಟನೆಯ ಕಾರ್ಯಕರ್ತರಿಂದ ಹತ್ಯೆಗೊಳಗಾದವರು. ವಿಷಯ ಹೀಗಿರುವಾಗ ಸಾಯಬೇಕಿದ್ದರೆ ಸಂಘಟನೆ ಸೇರಿ ಎಂದು ಹೇಳಿದ್ದರಲ್ಲಿ ತಪ್ಪೇನು? ಎಂದು ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ. ತಮ್ಮ ಸೋಲಿನ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರುವ ಟ್ರೋಲ್ ಗಳ ಬಗ್ಗೆ ಕಿಡಿಕಾರಿರುವ ಪ್ರತಿಭಾ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವೆಲ್ಲ ತಲೆತಗ್ಗಿಸುವಂತೆ ಮಾಡಿದ ಪುತ್ತೂರು, ದೇರಳಕಟ್ಟೆ, ತಣ್ಣೀರುವಾವಿ ಗ್ಯಾಂಗ್‍ರೇಪ್ ಪ್ರಕರಣ, ಪಬ್ ದಾಳಿ ಕುರಿತು ಮಾತಾಡುವಾಗ ಮಂಗಳೂರಲ್ಲಿ ಇರಲು ನಾಚಿಕೆಯಾಗುತ್ತದೆ ಎಂದು ಹೇಳಿದ್ದೆ. ನನ್ನ ಹೇಳಿಕೆಯಲ್ಲಿ ತಪ್ಪೇನು? ಜಿಲ್ಲೆಯಲ್ಲಿ ಹೆಣ್ಮಕ್ಕಳ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ನಡೆಯುತ್ತಲೇ ಇದೆ. ಇದನ್ನೆಲ್ಲ ಖಂಡಿಸಲು ಸೋಷಿಯಲ್ ಮೀಡಿಯಾ ಶೂರರಿಗೆ ತಾಕತ್ತಿಲ್ಲವೇ ಎಂದು ಪ್ರತಿಭಾ ಕುಳಾಯಿ ಪ್ರಶ್ನೆ ಮಾಡಿದ್ದಾರೆ. ಸೋತಿದ್ದರೂ ಜನರ ಪರ ಹೋರಾಟಗಳಲ್ಲಿ ನಿರಂತರ ತೊಡಗಿಕೊಳ್ಳುವುದಾಗಿ ಪ್ರತಿಭಾ ಕುಳಾಯಿ ಇದೇ ವೇಳೆ ಹೇಳಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ .. 
error: Content is protected !!