ಕಸ್ತೂರಿ ಕನ್ನಡ ಕಂಪಿನ ಸವರ್ಣ ದೀರ್ಘ ಸಂಧಿ…

ಅನ್ನ ಚಿನ್ನ ಸೆಕ್ಸ್ ಇವೆಲ್ಲಕ್ಕಿಂತ ಹೆಚ್ಚು ಮನುಷ್ಯ ಆಸೆ ಪಡೋದು ಯಾವುದಕ್ಕೆ ಗೊತ್ತಾ…? ಹೆಸರು…!! ಹೀಗಂತ ಚಿತ್ರದ ನಾಯಕ ಅರ್ಥಾತ್ ರೌಡಿ ಪಾತ್ರಧಾರಿ ಮುದ್ದಣ ಹೇಳ್ತಾ ಇದ್ರೆ ಹೌದಲ್ವಾ ಅನ್ನಿಸಿಬಿಡುತ್ತೆ. ರೌಡಿಯಿಸಂ ಹಿನ್ನೆಲೆಯ ಚಿತ್ರಗಳಂದ್ರೆ ಮಚ್ಚು ಲಾಂಗುಗಳ ಆರ್ಭಟ, ನೂರು ಮಂದಿ ಮರಿರೌಡಿಗಳ ಅರಚಾಟ, ಕ್ಲಬ್ಬು ಪಬ್ಬಿನ ಮಬ್ಬಿನಲ್ಲಿ ತುಂಡುಡುಗೆ ತೊಟ್ಟ ಹುಡುಗೀರ ಮಧ್ಯೆ ಮದ್ಯದ ಬಾಟ್ಲಿಗಳ ನಲಿದಾಟ ಇವಿಷ್ಟೇ ಅನ್ನೋ ಮಾತನ್ನು ಸವರ್ಣ ದೀರ್ಘ ಸಂಧಿ ಅನ್ನೋ ಚಿತ್ರ ಸುಳ್ಳು ಮಾಡಿದೆ. ಹೇಳಿಕೇಳಿ ಸವರ್ಣ ದೀರ್ಘ ಸಂಧಿ ಅಪ್ಪಟ ಕಸ್ತೂರಿ ಕನ್ನಡ ಚಿತ್ರ. ಕನ್ನಡತನವನ್ನು ಚಿತ್ರದುದ್ದಕ್ಕೂ ಪ್ರೇಕ್ಷಕನಿಗೆ ಉಣಬಡಿಸೋ ಚಿತ್ರದ ಕಥೆ ಪಾಸಿಟಿವ್ ರೌಡಿಯಿಸಂ. ಅನಿವಾರ್ಯವಾಗಿ ಕೈಯಲ್ಲಿ ಮಚ್ಚು ಹಿಡಿದು ಜೈಲು ಸೇರೋ ಹೀರೋ ನಂತರ ಪಾಸಿಟಿವ್ ರೌಡಿಯಿಸಂ ಅನ್ನೋ ಡಿಫರೆಂಟ್ ಮ್ಯಾನರಿಸಂ ಬೆಳೆಸ್ಕೊಂಡು ಸಮಾಜದ ನೊಂದವರ, ಶೋಷಿತರ ಕಣ್ಣೀರು ಒರೆಸಲು ಮುಂದಾಗುತ್ತಾನೆ. ಇಲ್ಲಿಯೂ ರೌಡಿಯನ್ನು ಮಾಮೂಲಿನಂತೆ ಸಭ್ಯ ಮನೆತನದ ಹೆಣ್ಣು ಹೆಸರಾಂತ ಗಾಯಕಿ ಇಷ್ಟಪಡುತ್ತಾಳೆ. ಆದರೆ ಆಕೆ ಯಾರೋ ಏನೋ ಎಂದುಕೊಳ್ಳುತ್ತಿರುವಾಗ ಚಿತ್ರ ಮತ್ತೊಂದು ತಿರುವು ಪಡೆದುಕೊಳ್ಳುತ್ತೆ.

ಸವರ್ಣ ದೀರ್ಘ ಸಂಧಿ ಚಿತ್ರದ ಮುಖ್ಯ ಆಕರ್ಷಣೆ ಮನೋ ಮೂರ್ತಿ ಸಂಗೀತ, ಶ್ರೇಯಾ ಘೋಷಾಲ್ ಇಂಪಾದ ಗಾಯನ ಮತ್ತು ವೀರೇಂದ್ರ ಶೆಟ್ಟರ ಸಾಹಿತ್ಯ. ಚಿತ್ರದ ಹಾಡುಗಳ ಮೂಲಕ ಮುಂಗಾರು ಮಳೆ ಬಳಿಕ ಕಳೆದುಹೋದಂತಿದ್ದ ಮನೋಮೂರ್ತಿ ಇಲ್ಲಿ ಮತ್ತೆ ಗುರುತು ಉಳಿಸಿಕೊಳ್ಳುತ್ತಾರೆ. ಕೊಳಲಾದೆನಾ… ಮತ್ತು ಮಧುಮಧುರ ಭಾವವು ಮೂಡುತಿದೆ.. ಎರಡೂ ಹಾಡುಗಳು ಚಿತ್ರದ ಜೀವಾಳ. ನಿರಂಜನ್ ದೇಶಪಾಂಡೆ, ಪದ್ಮಜಾ ರಾವ್, ಅಜಿತ್ ಹನುಮಕ್ಕನವರ್ ಪಾತ್ರಗಳಲ್ಲಿ ತೀರಾ ಸಹಜತೆಯಿದೆ. ನಾಯಕನನ್ನು ಬೆಳೆಸುವ ಪೈಲ್ವಾನ್ ಪಾತ್ರ ಚಿತ್ರ ಮುಗಿದ ಬಳಿಕವೂ ನೆನಪಲ್ಲಿ ಉಳಿಯುತ್ತೆ, ಪೈಲ್ವಾನ್ ಪಾತ್ರಕ್ಕೆ ನ್ಯಾಯ ನೀಡಿರೋ ಸುರೇಂದ್ರ ಬಂಟ್ವಾಳ್, ನಾಯಕ ಮುದ್ದಣನ ಗ್ಯಾಂಗ್ ನಲ್ಲಿ ಕಾಣಿಸಿಕೊಂಡಿರೋ ಗಿರೀಶ್ ಶೆಟ್ಟಿ ಪೆರ್ಮುದೆ ಸಲೀಸಾಗಿ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರಗಳ ಬಗ್ಗೆ ಹೇಳೋದಾದ್ರೆ ಇಲ್ಲಿ ಕಥೆಯೇ ಚಿತ್ರದ ನಾಯಕ ಅನ್ನಬಹುದು. ನಾಯಕ ಮುದ್ದಣ ಪಾತ್ರ ನಿರ್ವಹಿಸಿ ಚಿತ್ರದ ಕಥೆ, ನಿರ್ದೇಶನ, ಸಾಹಿತ್ಯ ಎಲ್ಲ ಜವಾಬ್ದಾರಿ ನಿರ್ವಹಿಸಿರೋ ವೀರೇಂದ್ರ ಶೆಟ್ಟಿ ಕಾವೂರು ತುಳುವಿನ ಚಾಲಿಪೋಲಿಲು ಅನ್ನೋ ಹಿಟ್ ಚಿತ್ರದ ಬಳಿಕ ಮತ್ತೊಮ್ಮೆ ಗೆಲ್ಲುವ ಎಲ್ಲಾ ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿದೆ. ಚಿತ್ರದ ನಾಯಕಿ ಮನೋರಮೆ ಪಾತ್ರಧಾರಿ ಕೃಷ್ಣ ನಟನೆ ಬಗ್ಗೆ ಹೇಳಬೇಕಿಲ್ಲ. ತೀರಾ ಸಿಂಪಲ್ ಆಂಡ್ ಬ್ಯೂಟಿಫುಲ್…❤ ಕೃಷ್ಣಳ ಅಪ್ಪನಾಗಿ ಕಾಣಿಸಿಕೊಂಡಿರೋ ರವಿ ಭಟ್ ನಟನೆಯೂ ಅಷ್ಟೇ. ಅಪ್ಪ ಮಗಳು ಎಲ್ಲಿಯೂ ಹಿಂದೆ ಬಿದ್ದಿಲ್ಲ.

ಸವರ್ಣ ದೀರ್ಘ ಸಂಧಿ ಕನ್ನಡ ಭಾಷಾಪ್ರಿಯರು, ವ್ಯಾಕರಣದ ಗಂಧ ಗಾಳಿಯಿರದ ಕನ್ನಡ ಪ್ರೇಮಿಗಳು, ಕನ್ನಡವೇ ಉಸಿರೆನ್ನುವ ನಮ್ಮ ಪ್ರಚಾರಪ್ರಿಯ ರಾಜಕಾರಣಿಗಳು ಒಮ್ಮೆ ನೋಡಲೇಬೇಕು. ಕನ್ನಡ ಅನ್ನೋ ಭಾಷೆ ಎಷ್ಟೊಂದು ಸುಂದರ ಅನ್ನೋದು ಅರಿವಾಗಿಬಿಡುತ್ತೆ… ಸವರ್ಣ ದೀರ್ಘ ಸಂಧಿ ಚಿತ್ರದಲ್ಲಿ ರೌಡಿಯಿಸಂ ಇದೆ ರಕ್ತಪಾತವಿಲ್ಲ, ನಾಯಕ-ನಾಯಕಿಯ ಮಧ್ಯೆ ನವಿರಾದ ಪ್ರೀತಿಯಿದೆ, ಆದರೆ ಕುಟುಂಬ ಕೂತು ಚಿತ್ರ ವೀಕ್ಷಿಸಲು ಮುಜುಗರ ಪಡುವ ದೃಶ್ಯಗಳಿಲ್ಲ, ಚಿತ್ರದುದ್ದಕ್ಕೂ ತಿಳಿಹಾಸ್ಯವಿದೆ, ಆದರೆ ಅಸಭ್ಯ ಡಬಲ್ ಮೀನಿಂಗ್ ಡೈಲಾಗ್ ಇಲ್ಲ, ಸುಮಧುರ ಸಂಗೀತವಿದೆ ಆದರೆ ಕಿವಿಗೆ ಚುಚ್ಚುವಂತಿಲ್ಲ…. ಸವರ್ಣ ದೀರ್ಘ ಸಂಧಿ ಶುದ್ಧ ಕುಟುಂಬ ಕೂತು ನೋಡಬಹುದಾದ ಮನೋರಂಜನಾ ಚಿತ್ರ. ಚಿತ್ರದಲ್ಲಿ ಎಲ್ಲೂ ಬೋರಿಂಗ್ ಅನ್ನೋ ಪದಕ್ಕೆ ಆಸ್ಪದವಿಲ್ಲ. ಇದು ನಿರ್ದೇಶಕ, ಮಿತ್ರ ವೀರೇಂದ್ರ ಶೆಟ್ಟರ ತಾಕತ್ತು…

ಚಾಲಿಪೋಲಿಲು ಅನ್ನೋ ಬ್ಲಾಕ್ ಬಸ್ಟರ್ ಚಿತ್ರ ಬರೋಬ್ಬರಿ 511 ದಿನಗಳ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ತುಳುವರು ಮತ್ತು ಕನ್ನಡದ ನಿಜವಾದ ಅಭಿಮಾನಿ ಕನ್ನಡಿಗರು ಮನಸ್ಸು ಮಾಡಿದಲ್ಲಿ ಸವರ್ಣ ದೀರ್ಘ ಸಂಧಿ ಅನ್ನೋ ಡಿಫರೆಂಟ್ ಚಿತ್ರ ಖಂಡಿತಾ ಗೆಲ್ಲಬಹುದು.. ಹೊಸ ಪ್ರಯೋಗಕ್ಕೆ ಬಂಡವಾಳ ಹೂಡಿರೋ ವೀರೇಂದ್ರ ಶೆಟ್ಟಿ, ಲುಷಿಂಗ್ಟನ್ ಥಾಮಸ್, ಮನೋ ಮೂರ್ತಿ, ಪದ್ಮಜಾ ರಾವ್ ಅವರಿಂದ ಮತ್ತಷ್ಟು ವಿಭಿನ್ನ ಪ್ರಯೋಗ ನಿರೀಕ್ಷಿಸಬಹುದು.
ಎನಿವೇ ಆಲ್ ದಿ ಬೆಸ್ಟ್??
-ಶಶಿ ಬೆಳ್ಳಾಯರು

error: Content is protected !!