ಅವಧೂತ ವಿನಯ್ ಗುರೂಜಿ ಭಕ್ತರಿಂದ ಯುವಕನ ಕೊಲೆಯತ್ನ: ನಾಲ್ವರ ಸೆರೆ

ಉಡುಪಿ: ಸ್ಯಾಂಡಲ್‍ವುಡ್ ನಟ ಸುದೀಪ್ ಬಗ್ಗೆ ಇತ್ತೀಚೆಗೆ ವಿಡಿಯೋವೊಂದರಲ್ಲಿ ಮಾತಾಡಿದ್ದ ಅವಧೂತ ಕೊಪ್ಪ ಆಶ್ರಮದ ವಿನಯ್ ಗುರೂಜಿ, `ಕಿಚ್ಚ ಸುದೀಪ್ ಹೆಬ್ಬುಲಿಯಂತೆ, ಆತನನ್ನು ಕಂಡರೆ ಮೈ ರೋಮಾಂಚನಗೊಳ್ಳುವುದಂತೆ, ಆತ ನಿಜವಾದ ಹುಲಿಯಲ್ಲ, ನಿಜವಾದ ಹುಲಿ ಬಂದರೆ ಸುದೀಪ್ ಪರಾರಿಯಾಗುತ್ತಾನೆ’ ಎಂದೆಲ್ಲ ಮಾತಾಡಿದ್ದರು. ಗುರೂಜಿ ಈ ಹೇಳಿಕೆಯಿಂದ ರೊಚ್ಚಿಗೆದ್ದಿದ್ದ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದು ಇದನ್ನೇ ಮುಂದಿಟ್ಟುಕೊಂಡು ಕುಂದಾಪುರದ ಸುದೀಪ್ ಅಭಿಮಾನಿಯೊಬ್ಬರ ಮೇಲೆ ಗುರೂಜಿ  ಭಕ್ತರು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ವಿವರ:
ಕಳೆದ ಭಾನುವಾರ ಸಂಜೆ ಕುಂದಾಪುರದ ಸಂಗಮ್ ಶಾಲೆ ಬಳಿ ಘಟನೆ ನಡೆದಿದ್ದು ಕಿಚ್ಚ ಸುದೀಪ್ ಅಭಿಮಾನಿ ರತ್ನಾಕರ್ ಪೂಜಾರಿ(30) ಮೇಲೆ ನಾಲ್ವರು ಏಕಾಏಕಿ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರತ್ನಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳನ್ನು ಗುರುರಾಜ್ ಪುತ್ರನ್(28), ಸಂತೋಷ ಮೊಗವೀರ(30), ಪ್ರದೀಪ್(29), ರವಿರಾಜ್(44) ಎಂದು ಗುರುತಿಸಲಾಗಿದೆ. ರತ್ನಾಕರ್ ಪೂಜಾರಿ ನಟ ಸುದೀಪ್ ಅಭಿಮಾನಿಯಾಗಿದ್ದು, ಸುದೀಪ್ ಕುರಿತು ಅವಹೇಳನಕಾರಿ ಮಾತಾಡಿದ್ದ ವಿನಯ್ ಗುರೂಜಿ ವಿರುದ್ಧ ಫೇಸ್‍ಬುಕ್ ಪೇಜ್‍ನಲ್ಲಿ ಕಮೆಂಟ್ ಪೋಸ್ಟ್ ಮಾಡಿದ್ದರು. ಇದನ್ನು ಮುಂದಿಟ್ಟುಕೊಂಡು ನಾಲ್ವರು ಆರೋಪಿಗಳು ರತ್ನಾಕರ್ ಅವರನ್ನು ತಡೆದು ನಿಲ್ಲಿಸಿ `ನೀನು ಭಾರೀ ವಿನಯ್ ಗುರೂಜಿಯನ್ನು ಟೀಕಿಸುತ್ತಿಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ರತ್ನಾಕರ್ ಪೂಜಾರಿ ಕಾರ್ ಚಾಲಕರಾಗಿದ್ದು ಬಾಡಿಗೆ ಮಾಡಲೆಂದು ಸಂಗಮ್ ಬಳಿ ಬಂದಿದ್ದರು. ಈ ವೇಳೆ ಪರಿಚಿತನಾಗಿರುವ ಗುರುರಾಜ್ ಪುತ್ರನ್ ಕರೆ ಮಾಡಿ ಮಾತನಾಡಲು ಇದೆ ಬಾ ಎಂದಿದ್ದರು. ಬಾಡಿಗೆಗೆ ಬಂದಿರುವ ಕಾರಣ ಈಗ ಬರಲು ಸಾಧ್ಯವಿಲ್ಲ ಎಂದು ರತ್ನಾಕರ್ ತಿಳಿಸಿದ್ದರು. ಈ ವೇಳೆ ಶಾಲೆ ಬಳಿ ಹೊಂಚು ಹಾಕಿ ಕುಳಿತಿದ್ದ ಗುರುರಾಜ್, ಸಂತೋಷ್ ಸೇರಿದಂತೆ 8-10 ಮಂದಿಯ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ರತ್ನಕಾರ್ ಕುಂದಾಪುರ ಠಾಣೆಗೆ ದೂರು ನೀಡಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳು ತಲೆಮರೆಸಿದ್ದು ಅವರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
error: Content is protected !!