ಸಾಂಸ್ಕೃತಿಕ ರಾಯಭಾರಿ ಸರ್ವೋತ್ತಮ ಶೆಟ್ಟಿಗೆ `ರಂಗಚಾವಡಿ’ ಪ್ರಶಸ್ತಿ

ಮಂಗಳೂರು- ಮಂಗಳೂರಿನ ಕಲಾ ಸಾಂಸ್ಕೃತಿಕ ಸಂಘಟನೆಯಾಗಿರುವ ರಂಗಚಾವಡಿಯು ಕಳೆದ
ಕೆಲವು ವರ್ಷಗಳಿಂದ ವಿವಿಧ ರಂಗದ ಸಾಧಕರಿಗೆ ತನ್ನ ವಾರ್ಷಿಕ ಸಮಾರಂಭದಲ್ಲಿ ರಂಗಚಾವಡಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಆ ಮೂಲಕ ಕಲಾಪ್ರೋತ್ಸಾಹಕ್ಕೆ ಸೂಕ್ತ ಗೌರವವನ್ನು ನೀಡುತ್ತಿದೆ. ಈ ಬಾರಿ ಕೊಲ್ಲಿ ರಾಷ್ಟ್ರದಲ್ಲಿ ಕರಾವಳಿಯ ಸಾಂಸ್ಕøತಿಕ ರಾಯಭಾರಿ ಎಂದೇ ಗುರುತಿಸಿಕೊಂಡಿರುವ ಸರ್ವೋತ್ತಮ ಶೆಟ್ಟಿ ಅಬುದಾಬಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅ.11ರಂದು ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಮತ್ತು ವಾರ್ಷಿಕೋತ್ಸವ ನಡೆಯಲಿದೆ.
ಸರ್ವೋತ್ತಮ ಶೆಟ್ಟಿ ಮೂಲತ: ಉಡುಪಿ ಜಿಲ್ಲೆಯ ಪರೀಕದವರು. ಮಟ್ಟಾರು ಪರಾರಿ ಸೂರಪ್ಪ ಶೆಟ್ಟಿ ಮತ್ತು ಪರೀಕ ಸರಸ್ವತಿ ಹೆಗ್ಡೆ ದಂಪತಿಯ ಪುತ್ರರಾಗಿರುವ ಇವರು ಉಡುಪಿ ಸಮೀಪದ ಪರೀಕದಲ್ಲಿ ಹುಟ್ಟಿ ಬೆಳೆದವರು. ತನ್ನ ಪ್ರಾಥಮಿಕ ಮತ್ತು ಪದವಿಪೂರ್ವ ಶಿಕ್ಷಣವನ್ನು ಪೆರ್ಡೂರು ಮತ್ತು ಹಿರಿಯಡಕದಲ್ಲಿ ಮಾಡಿರುವ ಇವರು ಬಳಿಕ ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿದ್ದರು. ಅಲ್ಲಿ ಗಳಿಕೆಯೊಂದಿಗೆ ಕಲಿಕೆ ಎನ್ನುತ್ತಾ ಉದ್ಯೋಗದಲ್ಲಿದ್ದುಕೊಂಡೇ ಕಾಲೇಜು ಶಿಕ್ಷಣ ಮಾಡಿದ್ದರು. ಪದವಿ ಮುಗಿಸುವ ಮೊದಲೇ ಸ್ವಲ್ಪ ಕಾಲ ಫಾರ್ಮಾಸಿಟಿಕಲ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ ಅವರು ಸ್ವಲ್ಪ ಕಾಲ ಸಿಂಡಿಕೇಟ್ ಬ್ಯಾಂಕ್‍ನಲ್ಲೂ ಸೇವೆ ಸಲ್ಲಿಸಿದ್ದರು. ಕಾಲೇಜು ಜೀವನದಲ್ಲೇ ಅವರು ನಾಟಕ ರಂಗದತ್ತಲೂ ಆಕರ್ಷಿತರಾಗಿದ್ದರು. ಪರ್ವತವಾಣಿ ಅವರ ಹಗ್ಗದಕೋಣೆ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಕಲಾಜಗತ್ತು ಸಂಘಟನೆಯನ್ನು ಕೆಲವು ಸಮಾನ ಮನಸ್ಕ ಮಿತ್ರರೊಂದಿಗೆ ಸೇರಿ 1979ರಲ್ಲಿ ಹುಟ್ಟುಹಾಕಿ, ಅದರ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ಈ ಸಂಘಟನೆಯ ಮೂಲಕ ಅಸಂಖ್ಯಾತ ಪ್ರತಿಭೆಗಳನ್ನು ಬೆಳಕಿಗೆ ತಂದವರು. ಈಗ ಈ ಸಂಘಟನೆಯು ಮುಂಬಯಿಯಲ್ಲೇ ಪ್ರಮುಖ ಕಲಾ- ಸಾಂಸ್ಕøತಿಕ ಸಂಘಟನೆ ಎಂದು ಗುರುತಿಸಿಕೊಂಡಿದೆ. ಪ್ರಸ್ತುತ ಅವರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಕಾಪು ಕೊತ್ವಾಲುಗುತ್ತು ಉಷಾ ಶೆಟ್ಟಿ ಅವರನ್ನು ವಿವಾಹವಾಗಿರುವ ಇವರಿಗೆ ಸಮರ್ಥ್ ಶೆಟ್ಟಿ ಮತ್ತು ಸಂಯುಕ್ತಾ ಶೆಟ್ಟಿ ಎಂಬಿಬ್ಬರುಉ ಮಕ್ಕಳು. ಸರ್ವೋತ್ತಮ ಶೆಟ್ಟಿ ಸಲ್ಲಿಸಿರುವ ಸಾಮಾಜಿಕ ಮತ್ತು ಸಾಂಸ್ಕøತಿಕ ಸೇವೆಗಾಗಿ 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಮುಂಬಯಿಯಲ್ಲಿ ನಡೆದಿದ್ದ ಅಖಿಲ ಭಾರತ
ಕನ್ನಡ ಸಾಂಸ್ಕøತಿಕ ಸಮಾವೇಶದಲ್ಲಿ ನೋಬಲ್‍ಮ್ಯಾನ್ ಪ್ರಶಸ್ತಿ, 2008ರಲ್ಲಿ ಆರ್ಯಭಟ ಪ್ರಶಸ್ತಿ, 2009ರಲ್ಲಿ ಕುವೈಟ್‍ನಲ್ಲಿ ಜರಗಿದ್ದ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಗ್ಲೋಬಲ್‍ಮ್ಯಾನ್ ಪ್ರಶಸ್ತಿ, 2016ರಲ್ಲಿ ವಿಜಯ ಬ್ಯಾಂಕ್ ವರ್ಕರ್ಸ್ ಆರ್ಗನೈಸೇಷನ್‍ನಿಂದ ಸುಂದರ ರಾಮ ಶೆಟ್ಟಿ ಪ್ರಶಸ್ತಿ, 2017ರಲ್ಲಿ ಬೆಂಗಳೂರು ತುಳು ಕೂಟದಿಂದ ತೌಳವ ಪ್ರಶಸ್ತಿ, 2018ರಲ್ಲಿ ವಿಶ್ವ ಕನ್ನಡಿಗ ಪ್ರಶಸ್ತಿ, ಇದೇ ವರ್ಷ ಕದಂಬ ಪ್ರಶಸ್ತಿ ಮತ್ತು 2018ರಲ್ಲಿ ಉಡುಪಿಯಲ್ಲಿ ಜರಗಿದ್ದ ವಿಶ್ವ ಬಂಟರ ಸಮ್ಮಿಲನದಲ್ಲಿ ಜೀವಮಾನ ಸಾಧಕ ಪ್ರಶಸ್ತಿ ಮುಂತಾದವು ಪ್ರಮುಖವಾಗಿದೆ. ಈಗ ಈ ಸಾಲಿಗೆ ರಂಗಚಾವಡಿ ಪ್ರಶಸ್ತಿಯೂ ಸೇರಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಯುಎಇ ಘಟಕದ ಅಧ್ಯಕ್ಷರಾಗಿರುವ ಇವರು 2016ರಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಜರಗಿದ್ದ ವಿಶ್ವ ತುಳು ಆಯನೊದ ಅಧ್ಯಕ್ಷರಾಗಿದ್ದರು.
error: Content is protected !!