ತ್ಯಾಜ್ಯದಂಗಡಿಯಾದ `ಹಳೆಯಂಗಡಿ’!!

ಮಂಗಳೂರು: ಹಳೆಯಂಗಡಿಗೂ ತ್ಯಾಜ್ಯಕ್ಕೂ ಬಿಡಿಸಲಾರದ ನಂಟು. ಕಳೆದ ಕೆಲವರ್ಷಗಳಿಂದ ಇಲ್ಲಿನ ಹೆದ್ದಾರಿಯ ಇಕ್ಕೆಲದಲ್ಲಿ ಸುರಿಯುತ್ತಿರುವ ತ್ಯಾಜ್ಯದಿಂದಾಗಿ ಪರಿಸರ ಗಬ್ಬೆದ್ದು ನಾರುತ್ತಿದ್ದರೂ ಸಂಬಂಧಪಟ್ಟ ಪಂಚಾಯತ್ ಆಗಲೀ ಆರೋಗ್ಯ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇತ್ತೀಚೆಗೆ ಸ್ಥಳೀಯ ಸಂಘಟನೆಗಳು ತಾವೇ ಮುತುವರ್ಜಿ ವಹಿಸಿ ತ್ಯಾಜ್ಯ ಸುರಿಯುತ್ತಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಿದ್ದೂ ಅಲ್ಲದೆ ಮುಂದೆ ತ್ಯಾಜ್ಯ ಸುರಿಯುವವರನ್ನು ಕಾನೂನು ಪ್ರಕಾರ ಹಿಡಿದು ಶಿಕ್ಷಿಸಲು ಸಿಸಿ ಕೆಮರಾವನ್ನೂ ಅಳವಡಿಸಿದ್ದವು. ಆದರೆ ಇದರ ಮರುದಿನದಿಂದಲೇ ತ್ಯಾಜ್ಯ ಸುರಿಯುವವರು ಇಲ್ಲಿಂದ ನೂರು ಮೀಟರ್ ದೂರದ ಸ್ಥಳವನ್ನು ತ್ಯಾಜ್ಯ ಸುರಿಯಲು ಬಳಸಿಕೊಂಡಿದ್ದು ಪರಿಸರ ತ್ಯಾಜ್ಯಮಯವಾಗಿ ವಾಸನೆ ಬೀರುತ್ತಿದೆ.
ಖಾಸಗಿ ಸ್ಥಳದಲ್ಲಿ, ಹೆದ್ದಾರಿ ಬದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಬಿದ್ದು ಹೆದ್ದಾರಿಯವರೆಗೆ ಹಬ್ಬಿದ್ದರೂ ಗ್ರಾಮ ಪಂಚಾಯತ್ ಇತ್ತ ಕಣ್ತೆರೆದು ನೋಡುತ್ತಿಲ್ಲ. ತ್ಯಾಜ್ಯದ ಕೊಳೆತ ನೀರು ಪಕ್ಕದ ಗದ್ದೆಯಲ್ಲಿ ಶೇಖರಣೆಗೊಂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ರಾತ್ರಿ ಹಗಲೆನ್ನದೆ ಪರಿಸರವಾಸಿಗಳು, ವಾಹನಗಳ ಸವಾರರು ಇಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವ ಕಾರಣ ಜನರಿಗೆ ತ್ಯಾಜ್ಯದ ರಾಶಿ ದಿನೇ ದಿನೇ ಬೆಳೆಯುತ್ತಿದೆ. ತ್ಯಾಜ್ಯ ನಿರ್ವಹಣೆ ಮಾಡಬೇಕಾದ ಸ್ಥಳೀಯ ಪಂಚಾಯತ್ ಇನ್ನಾದರೂ ಗಾಢನಿದ್ದೆಯಿಂದ ಎದ್ದೇಳುತ್ತೋ ಕಾದು ನೋಡಬೇಕಿದೆ.
error: Content is protected !!